ವಿದೇಶದಲ್ಲಿ ಮತ್ತೆ ಮೋದಿ ಜಪ... ದೇಶದ ಸಾಂಸ್ಥಿಕ ಚೌಕಟ್ಟಿನ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತಿದೆ ಎಂದು ರಾಹುಲ್​ ವಾಗ್ದಾಳಿ | Rahul Gandhi

Rahul Gandhi | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ
Published on
Rahul Gandhi: ಭಾರತದ ಸಾಂಸ್ಥಿಕ ಚೌಕಟ್ಟಿನ ಮೇಲೆ ಬಿಜೆಪಿ ಹಿಡಿತ ಸಾಧಿಸುತ್ತಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಛರಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ.
ಜರ್ಮನಿಯ ಬರ್ಲಿನ್‌ನಲ್ಲಿರುವ ಹರ್ಟೀ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್​, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯ ಸಾಧನಗಳಾಗಿ ಪರಿವರ್ತಿಸಿದೆ. ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರೀಯ ತನಿಖಾ ದಳ (CBI) ದಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರ ವಿರುದ್ಧ ಬಹುತೇಕ ಯಾವುದೇ ಪ್ರಕರಣಗಳಿಲ್ಲ, ಆದರೆ ಸರ್ಕಾರವನ್ನು ವಿರೋಧಿಸುವವರನ್ನು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಉದ್ಯಮಿಗಳನ್ನು ಗುರಿಯಾಗಿಟ್ಟುಕೊಂಡು ಬೆದರಿಕೆ ಹಾಕಲಾಗುತ್ತಿದೆ, ಬಿಜೆಪಿ ತನ್ನ ರಾಜಕೀಯ ಅಧಿಕಾರವನ್ನು ಬಲಪಡಿಸಿಕೊಳ್ಳಲು ರಾಜ್ಯ ಸಂಸ್ಥೆಗಳನ್ನು ಬಳಸುತ್ತಿದೆ, ಇದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸಂಪನ್ಮೂಲಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ನಡೆಯುತ್ತಿದೆ, ಇದನ್ನು ಎದುರಿಸಲು ಮಾರ್ಗಗಳನ್ನು ವಿರೋಧ ಪಕ್ಷಗಳು ಕಂಡುಕೊಳ್ಳುತ್ತವೆ, ಈ ಹೋರಾಟವು ಕೇವಲ ಒಂದು ಪಕ್ಷವಾಗಿ ಬಿಜೆಪಿಯ ವಿರುದ್ಧವಲ್ಲ, ಬದಲಾಗಿ ಭಾರತದ ಸಾಂಸ್ಥಿಕ ವ್ಯವಸ್ಥೆಯ ಮೇಲಿನ ನಿಯಂತ್ರಣ ಎಂದು ಕರೆಯುವುದರ ವಿರುದ್ಧವಾಗಿದೆ ಎಂದರು. ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಕೆಲವು ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿರುವ ರಾಹುಲ್​, ಇದು ಯುದ್ಧತಂತ್ರದ ಸ್ಪರ್ಧೆಗಳು ಎಂದು ಸಮರ್ಥಿಸಿಕೊಂಡರು.
ಇಂಡಿಯಾ ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳು ಯುದ್ಧತಂತ್ರದ ವಿಷಯದಲ್ಲಿ ಭಿನ್ನವಾಗಿರಬಹುದಾದರೂ, ಆರೆಸ್ಸೆಸ್ ದೃಷ್ಟಿಕೋನವನ್ನು ವಿರೋಧಿಸುವ ಮೂಲ ಪ್ರಶ್ನೆಯಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ, ಸಂಸತ್ತಿನಲ್ಲಿ ಕಾನೂನುಗಳನ್ನು ವಿರೋಧಿಸುವ ವಿಷಯದಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ನಿಂತಿದ್ದೇವೆ. ಈ ಹೋರಾಟವು ಚುನಾವಣೆಗಳನ್ನು ಮೀರಿ ಭಾರತದ ಪರ್ಯಾಯ ದೃಷ್ಟಿಕೋನಕ್ಕೆ ತಲುಪಿದೆ. ಬಿಜೆಪಿ ಸಂವಿಧಾನ ಮತ್ತು ರಾಜ್ಯಗಳು, ಭಾಷೆಗಳು ಮತ್ತು ಧರ್ಮಗಳ ನಡುವಿನ ಸಮಾನತೆಯ ತತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್​ ಆರೋಪಿಸಿದರು.
ಕೇವಲ ಒಬ್ಬ ವ್ಯಕ್ತಿಯ ಇಚ್ಛೆಯಂತೆ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಲಕ್ಷಾಂತರ ಜನರು ನಂಬಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಅನೇಕ ಜನರು ಬೆಂಬಲಿಸಿದರೂ, ಅದಕ್ಕಿಂತ ಹೆಚ್ಚಿನವರು ಅವರ ಸಿದ್ಧಾಂತ ಮತ್ತು ಭಾರತದ ದೃಷ್ಟಿಕೋನವನ್ನು ಒಪ್ಪಿಲ್ಲ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net